Wednesday, December 7, 2011

ಕೆಟ್ಟ ಕನಸಿಗೊಂದು ಕಿವಿಮಾತು

ಮೆಚ್ಚು ಕ್ಷಣಗಳ
ನೆನಪುಗಳ ಅಂಗಳದಲ್ಲಿ...
ಹುಚ್ಚು ಬಯಕೆಗಳ
ಹೃದಯದ ಆಳದಲ್ಲಿ...

ಸುಳಿಯಬೇಡ ನೀನು!

ರಂಗು ಏಳರ
ಮಳೆ-ಬಿಲ್ಲಿನಲ್ಲಿ ...
ಚಿಟ್ಟೆಯೊಂದರ
ಆಟ ಮೈಮಾಟದಲ್ಲಿ...

ಕರಗಿಹೋಗು ನೀನು!

ನೆಮ್ಮದಿಯಿಂದ ನಿದಿರೆ-ಮಾಡಬೇಕು ನಾನು...

Monday, November 14, 2011

ಆತ್ಮಹತ್ಯೆ!

ನೊಂದಿರುವೆ ನೀನು
ಕಹಿಯಲೆ ಬೆಂದಿರುವೆ ನೀನು
ಕ್ಷಣಕಾಲ ಪಡೆ ನೀ ತಾಳ್ಮೆಯನು
ಮನವೆ ದುಡುಕಬೇಡ ನೀನು ....!


ಕಣ್ಣೀರಲೆ ಹರಿಸಿಬಿಡು ನಿನ್ನ ನೋವನು

ನಿನ್ನವರಲಿ ಹಂಚಿಕೊ ವ್ಯಥೆಯನು
ಮೌನವಾಗಿ ಕಳೆದುಬಿಡು ಸಮಯವನು
ಮನವೆ ದುಡುಕಬೇಡ ನೀನು ....!


ಬಾನಿನ ರವಿಯು ಬಾಡನು

ನಿನಗಾಗಿಯೆ ಒಮ್ಮೆ ಮೂಡುವನು
ಛಲದಿಂದ ಅಪ್ಪಿಕೊ
ಕ್ಷಣವನು
ಮನವೆ ದುಡುಕಬೇಡ ನೀನು ....!


ಬದುಕೊಂದು ವರ ಭೂಮಿಯ ಮೇಲೆ ...

Sunday, October 2, 2011

ಬಿರಿದ ಭಾವ


ಮುಸುಕಿದ ಮಂಜಿನಲಿ
,
ಮುಂಜಾನೆ ಮಡಿಲಲ್ಲಿ,
ಮುತ್ತಿನಂತೆ ಹೊಳೆಯುವ ಆಸೆ
...!


ಮುಸ್ಸಂಜೆ ತಂಪಿನಲಿ,
ಮೋಡಗಳ ದಾಟುತಲಿ,
ಮುಗಿಲಲ್ಲಿ ಮಿನುಗವ ಆಸೆ
...!


ಮೊಗ್ಗುಗಳ ಕಂಪಿನಲಿ,
ಮುರಳಿಗಳ ಇಂಪಿನಲಿ,
ಮನಸುಗಳ ತೊಯಿಸುವ ಆಸೆ
...!


ನಾನೊಬ್ಬ ಭಾವ ಜೀವಿ....

Monday, August 15, 2011

ಮಮಕಾರ ಮಾಯೆ...!


ಬಿಟ್ಟು ಉಳಿದರೆ, ಬೇಯುತಿದೆ ಮನಸು!
ಅಗಲಿ ನಡೆದರೆ, ಬೇಕೆನ್ನುತಿದೆ ಮನಸು!

ಕರುಳು ಹಂಚಿದ ಫಲವೊ...
ನೆತ್ತರಲಿ ಹರಿದ ಬಂಧವೊ...
ಮನಸನು ತಡೆಯುವ ಬಲವೊ ಇದು...


ತವರಿನಲಿ ತಾಯಿಯನು ಅಗಲಿ...
ಪತಿಯ ಪುರಕೆ ಕದಲಿ...
ನಾ ಹೋಗೆನೆಂದಳು ಮದುಮಗಳು ಓರೆಗಣ್ಣಲಿ...!

ಒಪ್ಪದ ಹೆಜ್ಜೆಯನು ತಡೆಯಿತು ಕಣ್ಣೀರು...
ಕೈಬಳೆ, ಕಾಲ್ಗೆಜ್ಜೆ ಸುಮ್ಮನಾದವು ಕಣ್ಣೀರೆದುರು...
ಹೆತ್ತ ಕರುಳನು ಸಂತೈಸಿದವರೆ ಎಲ್ಲರೂ...

ಇದು ಮಮಕಾರ ಮಾಯೆ...!

Thursday, July 14, 2011

300

ಸಿಡಿಲೆದೆಯ ಬಡಿತ,
ಗುಡುಗಿನಂತೆ ಗರ್ಜಿಸುತ...

ಹೆಬ್ಬುಲಿಯಂತೆ ಹುಬ್ಬೇರಿಸುತ,
ಕೆರಳಿ ಕಣ್ಣನು ಕೆಂಪಾಗಿಸುತ...

ನರನಾಡಿಯಲಿ ಪೌರುಷವನು ಎಬ್ಬಿಸುತ ,
ಎದುರಾಳಿಯ ಎದೆಯನು ಸೀಳುತ ...

ಕೋಪದಿಂದ ಕಿಡಿ ಕಾರುತ,
ಕೆರಳಿದ ಕೇಸರಿಯಂತೆ ಬೇಟೆಯಾಡುತ,

ಸಾವನ್ನೇ ಅಪ್ಪಿಕೊಳ್ಳುತ
,
ಯುದ್ಧ ಭೂಮಿಯನೇ ಅಂಜಿಸುತ...!!!

ಒಬ್ಬರಿಗೆ ಮತ್ತೊಬ್ಬರು ಜೊತೆಯಾಗಿ ಕೂಗಿದರು,
ಮೂರು ನೂರು ಕ್ರಾಂತಿ ವೀರರು ...

Thursday, May 26, 2011

ಶರತ್ಕಾಲ

ಹಸಿರಾದ ಎಲೆಗೆ
ಹೊಸ ಚಿಗುರಿನ ಬಯಕೆಯಾಗಿ

ಹಾಡು ಮರೆತ ಕೋಗಿಲೆಗೆ
ಹೊಸ ಹಾಡಿನ ನೆನಪಾಗಿ

ಹಸಿರೆಲ್ಲವೂ ಹಳದಿಯಾಗಿ
ಎಲೆಗಳೆಲ್ಲಾ ಒಂದೊಂದಾಗಿ

ಉದುರಿಹೋಗುತಿರಲು
ಒಂದಾಗಿ ನಗುತಿರಲು

ಸವಿಯಾಯಿತು ಕ್ಷಣ
ಕವಿಯಾಯಿತು ನನ್ನ ಮನ...

Sunday, April 17, 2011

ಸೃಷ್ಠಿ...!

ಅರಿವನು ಜೊತೆಯಾಗಿ
ಮರೆವನು ವರವಾಗಿ
ನಿನ್ನ ಸುಂದರ ಸೃಷ್ಠಿಯಲಿ
ಪುಟ್ಟ ಹೃದಯದಲಿ


ಜೀವ ತುಂಬಿದ ನಿನ್ನ ಕಲೆಗೆ


ಸಹಿಸಲಾರದ ನೋವು ಕಪ್ಪು ಕಲೆಯಾಗಿದೆ
ಹಲವು ಮನಸುಗಳು ಮರೆಯದಾಗಿದೆ
ಕಣ್ಣಂಚಿನಿಂದ ಕಣ್ಣೀರು ಕವಲೊಡೆದು ಹರಿಯುತಿದೆ
ನಿನಗೆ ತಿಳಿಯದೆ?

Monday, March 14, 2011

ಚಲಿಸುವ ಮೋಡಗಳು


ನೀಲಿ
ಬಾನಿನಲಿ ನಡೆದು ಹೋಗುವ ಮೋಡಗಳೆ
ತಂಗಾಳಿಯಲಿ ತೇಲಿ ಹೋಗುವ ಮೋಡಗಳೆ
ನಿಮ್ಮ ಪಯಣದಲಿ ನಿಮ್ಮ ಜೊತೆಯಿರುವವರಾರು?

ನಡು ರಾತ್ರಿಯ ನಿಶ್ಶಬ್ದ ನಾಡಿನಲಿ
ತಾರೆಗಳ ಅಂಗಳದಂತಿರುವ ಬಾನಿನಲಿ
ನಿಮ್ಮೊಂದಿಗೆ ಪಿಸುಮಾತಾಡುವ ಗೆಳೆಯರಾರು?

ಚಂದಿರನ ಸನಿಹದಲಿ ಸುಳಿದರೂ
ಕವಿಗಳ ಮನ ಸೆಳೆದರೂ
ನನ್ನ ಹೊರತು ನಿಮ್ಮನು ಬಣ್ಣಿಸಿದವರಾರು?

Friday, January 14, 2011

ಹೂಗುಚ್ಚ

ಗಾಢವಾದ ಮೌನ ನೋಟದಲಿ,

ನಿಮ್ಮ ಮಡಿಲಲ್ಲೇ ಮೈ-ಮರೆತ ಬಣ್ಣದಲಿ,

ಕುಡಿಗಳ ಕೊನೆಯಲಿ,

ನಗುತ ನಿಂತ ನೀರ ಹನಿಯಲಿ,

ಮೈ-ಮನವೆಲ್ಲಾ ತುಂಬಿಹೋದ ಕಂಪಿನಲಿ,

ಮನಸಿಗೆ ಕೇಳುವಂತೆ,

ನೀವು ನುಡಿದ ಭಾಷೆ ಯಾವುದು?