Saturday, December 29, 2012

ಅಮಾನುಷವದು ನಿಲ್ಲು .....!!!!

  
                                                                            ಮುಂಜಾನೆಯಲಿ ಬಿರಿದ ಮಲ್ಲಿಗೆ,

ಕೋರಿ ಎನ್ನ ಮುಡಿಯನೇರಿ 
ಘಮ್ಮೆಂದು ನಗುವನು ಬೀರಿ 
ನಲಿವಾಗ, ನೂರು ಕನಸು ಕಟ್ಟಿದೆ ನಾನು ನಾರಿ !
ಕಳೆಬೇಕು ಈ ಕ್ಷಣ ಅವನ ಸೇರಿ !

ಅವನಲ್ಲದ ಅದಾವುದೊ ಕರಿ-ನೆರಳು ಮೂಡುತಿದೆ ಮೆಲ್ಲಗೆ,

ಭೀತಿಯಲಿ ಬಯಲು ದಾರಿ 
ಬಾಡುತಿದೆ ಹಿತ್ತಲಿನ ಬಳ್ಳಿಯ ಸಿರಿ 
ಏರುತಿದೆ ಎದೆಯ ಬಡಿತದ ಪರಿ !
ಅಮಾನುಷ ಬಯಕೆ ಸೇರುತಿದೆ ನನ್ನ ಕೋರಿ !

ಕತ್ತಲನು ಹಂಚದಿರು ಎನ್ನ ಬಾಳಿಗೆ,
                                                              ಮುಡಿದ ಮಲ್ಲಿಗೆಯ ಕೆಡವಬೇಡ 
ತೊಟ್ಟ ಬಳೆಗಳ ಮುರಿಯಬೇಡ 
ನೂರು ಬಯಕೆಯ ನನ್ನೆದೆಯ ನೊಯಿಸಬೇಡ !
 ಜಾಜಿಯಂತ ನನ್ನ ಮುಟ್ಟಬೇಡ !

ನೆನಪಾಗದೇಕೋ   ನಿನಗೆ ಸೋದರಿಯ ಸಂಬಂಧ !!!!!!!

Wednesday, December 12, 2012

ನೀ ಯಾರು?


 

ಶಬ್ದವಿಲ್ಲದ ನನ್ನ ಮನಸಿನಲಿ 
ನೀ ಸದ್ದುಮಾಡಿ,

ಬಾಡಿದ ಮುಖದಲಿ 
 ನಗುವನು ತಂದಿತು ನಿನ್ನ ಮೋಡಿ !!!

ಮೌನವಾಗಿದ್ದ ನನ್ನ ಕಣ್ಣು 
ನಿನ್ನನ್ನೇ ಎದುರುನೋಡಿ,

ನಿನ್ನನ್ನೇ ಬೇಕೆನ್ನುತಿದೆ 
     ನನ್ನ ಮನದ ಹಂಬಲ ನನ್ನನ್ನು ಕಾಡಿ !!

     ನೀ ಯಾರು? ................ಯಾರು ನೀ?



Tuesday, November 6, 2012

ಅಮ್ಮ! ನನ್ನ ಹೊಡೆಯಬೇಡ...


                                                            

ನರಗಳು ಬಲಿತ ನಿನ್ನ ಕೈಯ್ಯಿಂದ,
ನೀ ಕೊಡುವ ಪೆಟ್ಟಿನಿಂದ,
ನನ್ನ ಎಳೆ-ಮೈಯ್ಯಿ ಕೆಂಪಾಗುತಿದೆ, ನಡುಗುತಿದೆ ಹೆದರಿಕೆಯಿಂದ
ಅಮ್ಮ! ನನ್ನ ಹೊಡೆಯಬೇಡ ನೀನು...

ಕಣ್ಣೀರು ಸುರಿಸಿ, ಅಳುತಿರುವೆ ಏರು-ದನಿಯಿಂದ,
ನಿನ್ನ ಹೊರತು, ಬೇರೆಲ್ಲರೂ ಕಾಣುತಿಹರು ನನ್ನ ಕರುಣೆಯಿಂದ,
ಮರೆತೆಯಾ? ನಾನು ನಿನ್ನ ಕಂದ
ಅಮ್ಮ! ನನ್ನ ಹೊಡೆಯಬೇಡ ನೀನು...

ಮುರಿದ ಗೊಂಬೆಯಾದರೂ ಸಾಕು ನನಗೆ
ಮೌನವಾಗುವೆ ಜಾಣತನದ ಮಾತಿಗೆ
ಹಾಲು, ಲಾಲಿ-ಹಾಡು ಮಾತ್ರ ಸಾಕು ನನಗೆ
ಅಮ್ಮ! ನನ್ನ ಹೊಡೆಯಬೇಡ ನೀನು...

ಸಹಿಸಲಾರೆನು ಈ ನೋವನ್ನು...

Tuesday, October 16, 2012

ತೀರದಿಂದ ತೀರಕೆ....!


ಕರಗುತಿಹ ಸುತ್ತಲ ಸಂಜೆಯಲಿ,
ದೂರವ ಮರೆಸುತಿಹ ದಾರಿಯಲಿ,
ಮುನ್ನಡೆಸಿದ ಮನದ ಬಯಕೆ ಯಾವುದೊ,
ಮೈಮರೆಸಿದ ಮುಸ್ಸಂಜೆ ಎಂತದೊ....!!


ನೀರಲ್ಲಿ ನಡೆವ ಅಲೆಗಳ ಸೇರಿ,
ತೇಲುತ ತೂಗುತಿಹ ತೆಪ್ಪವನು ಏರಿ,
ನಿರಾಳವಾದ ನೀಲಿ ಗಗನದ ಕಡೆಗೆ,
ಪ್ರತಿ -ಕ್ಷಣ ಕದಲುವ ಕಡಲಿನ ಕೊನೆಗೆ ...!!


  ಸಾಗುತಿಹ ಈ ಪಯಣ ನಿರಂತರ !
ತೀರದಿಂದ ತೀರಕೆ  ಈ ಪಯಣ ನಿರಂತರ !

Sunday, September 16, 2012

ಕಡುಬು ಹಬ್ಬದ ಕಥೆಯಲ್ಲಿ....!!!



                           ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ 
                           ಮೂಷಿಕನೇ  ಮೂಲಂ,
                           ನಿನ್ನೀ ಜನನಕೆ ಕಾರಣಂ!

                           ಬಾಗಿಲು ಕಾದು,
                           ಈಶ್ವರಿಗೆ  ಸಲ್ಲಿಸಿದೆ ಗೌರವಂ
                           ಹರನ ಪ್ರವೇಶಕ್ಕೂ ನೀ ಮಾಡಿದೆ ತಿರಸ್ಕಾರಂ ! 
                      
                           ತಿರಸ್ಕಾರಂ
                           ಹರನ ಕೋಪಾಗ್ನಿಗೆ ಕಾರಣಂ
                           ತ್ರಿಶೂಲಂ, ತ್ರಿನೇತ್ರಂ ಮಾಡಿದವು ಶಿರಚ್ಛೇದನಂ!

                           ಹರಿಯಿತು ಅಲ್ಲಿ
                           ಶಾಂಭವಿಯ ಕಣ್ಣೀರ ಸಮುದ್ರಂ!
                           ಸಾಂತ್ವನಕೆ ಸಕಲ ದೇವಗಣಂ ಅಲ್ಲಿ ಪ್ರತ್ಯಕ್ಷಂ

                            ಕಾಡಿನೊಳು
                            ಉತ್ತರಕೆ ಮಲಗಿದ್ದ ಗಜ ಒಂದರ ರುಂಡಂ
                            ನಿನಗೆ ಸೇರಿಸಿ ಹಾಡಿದರು ನಮೋ ವಿನಾಯಕಂ ...

                            ಅಂದಿನಿಂದ ಮೊದಲು
                            ಪೂಜೆಗೆ ಮೊದಲು ಅಗಜಾನನ ಪದ್ಮಾರ್ಕಂ
                            ಭಾದ್ರಪದ ಚವಿತಿಯಂದು ಗಣೇಶ ಚತುರ್ಥಿ ಆಚರಣಂ!

                            ನಿನಗಿಷ್ಟವೆಂದು ಎಲ್ಲರ ಮನೆಯಲ್ಲೂ ಕಡುಬೇ  ಪ್ರಸಾದಂ!!!!

        
   
     

Monday, June 18, 2012

ತಾವರೆಯ ತುಟಿಗಳು ನೆನೆದಾಗ ...!!




ಮುದ್ದು  ಮೀನಿನ ಅಕ್ಕರೆಯ ಮುತ್ತನ್ನು ,
ಮರೆಯಲಿ ಹೇಗೆ ?
ಸುತ್ತಲಿರುವ ಮೆತ್ತನೆಯ ಅಲೆಗಳನ್ನು ,
ಮತ್ತೊಮ್ಮೆ ಕರೆಯಲಿ ಹೇಗೆ ?

ಮಡಿಲನು ಸೇರಿದ ಮುತ್ತಿನ ಹನಿಗಳು,
ಉಳಿಯಲಿ  ಹಾಗೆ ....
ನೀರಲ್ಲಿ ನೆನೆದ ನನ್ನೆರಡು ತುಟಿಗಳು,
ಎಂದೂ ಮಿನುಗಲಿ ಹಾಗೆ....

ಬಿರಿದ ನನ್ನ ತನುವು,
ಕಂಪಿನಲಿ ಬೆರೆತ ನನ್ನ ಮನವು,
ಜೊತೆಯಾಗಿ ಹಾಡುತಿದೆ ಹಂಸಗೀತೆ,
ಕಣ್ಣೆರಡು ನುಡಿಯುತಿದೆ ನೆಚ್ಚಿನ ಕವಿತೆ !!!
 

Monday, May 21, 2012

ಚಿತೆಯನು ಕಾದ ಚಕ್ರವರ್ತಿ !!

ಸಿರಿವಂತ ರಾಜ ಗುಣವಂತ, 
ಸತಿ ಚಂದ್ರಮತಿ, ಸುತ ಲೋಹಿತ
ನಿಜವನು ನುಡಿವುದೇ ವ್ರತ!

ಸಕಲವೂ ಕಳೆದ ಕೌಶಿಕನ ಕಾಟದಲ್ಲಿ !
ರಾಶಿ ಹಣಕ್ಕಾಗಿ ಕಾಶಿಯಲ್ಲಿ, 
ಮಡದಿ, ಮಗನನು ಮಾರಿದ ಪುರ ಮಧ್ಯದಲ್ಲಿ ...
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!

ತೀರದೇ  ಋಣ,
ಹೆಣಗಳ ಕಾಯಲು ಸೇರಿದ ಮಸಣ!!
ಸರ್ಪವು ಕಳೆಯಿತು ಪ್ರಿಯಸುತನ ಪ್ರಾಣ... 
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!

ಕರಾಳ ರೂಪ ತಾಳಿದ , ಕಾಲನು  
ಮಗನ ಸುಡಲು ಹಣವ ಕೇಳಿದ ಮಡದಿಯನು! 
ಚೋರಿಯೆಂದು, ಕಡಿಯಲು ಹೇಳಿದರು ಚಂದ್ರಮತಿಯನು!!!
ಆದರೇನು, ಹುಸಿ ನುಡಿವನೇ ಹರಿಶ್ಚಂದ್ರ !!!

Wednesday, April 11, 2012

ಶುಭ ವಿವಾಹಕ್ಕೆ ಶುಭ ಹಾರೈಕೆ!


ಶೀತಲ ಚಂದ್ರಮನ ಬೆಳಕಿನಂತೆ,
ಅರಳು ಮಲ್ಲಿಗೆಯ ನೆರಳಿನಂತೆ,
ತಂಪು ತಂಪಾಗಲಿ ನಿಮ್ಮ ಬಾಳು...

ಚೈತ್ರದ ಚಿಗುರಿನಲ್ಲಿ ಹಸಿರಿನಂತೆ,
ಕೋಮಲೆಯ ಕಣ್ಣಲ್ಲಿ ಕನಸಿನಂತೆ,
ಬೆರೆಯಲಿ ನಿಮ್ಮೆರಡು ಮನಸುಗಳು...

ಪ್ರೇಮ ಕಾವ್ಯದ ಭಾವದಂತೆ,
ಒಲವು ಗೀತೆಯ ಪಲ್ಲವಿಯಂತೆ,
ಮಧುರ ಮಧುರವಾಗಲಿ ನಿಮ್ಮ ಕ್ಷಣಗಳು...

ಜನುಮಗಳ ಕೊನೆಯವರೆಗೂ ಜೊತೆಯಾಗಿ ಸಾಗಲಿ ನಿಮ್ಮ ಜೋಡಿ...!

Tuesday, March 6, 2012

ಹೆಣ್ಣು!


ಕತ್ತಲೆಂಬ,
ನಿತ್ಯ-ಧರ್ಮದ ಕೊನೆಯಲ್ಲಿನ ಬೆಳಕಾದರೆ,
ಸುಪ್ರಭಾತವೆಂಬ,
ನಿತ್ಯ-ಗೀತೆಯೊಳಗಿನ ಸತ್ಯ-ಭಾವವಾದರೆ ಹೆಣ್ಣು ...
ಎಷ್ಟು ಚೆನ್ನ!


ಹೃದಯವೆಂಬ,
ಸಾಗರದ ಆಳಕೆ ಸೇರುವ ಮುತ್ತಾದರೆ,
ಬೇಸರವೆಂಬ,
ಸಾಕೆನಿಸುವ ಗಳಿಗೆಗೆ ಸಹನೆಯಾದರೆ ಹೆಣ್ಣು...
ಎಷ್ಟು ಚೆನ್ನ!


ಸಾವೆಂಬ,
ಕೊನೆ ಉಸಿರಲ್ಲೂ ನೆನೆಯುವ ಕನಸಾದರೆ,
ಬದುಕೆಂಬ,
ನೂರ್ವರುಷುದ ಕಥೆಯೊಳಗಿನ ಅರ್ಥವಾದರೆ ಹೆಣ್ಣು...
ಎಷ್ಟು ಚೆನ್ನ!


Thursday, January 26, 2012

ಭಾರತಿಗೆ ಜಯವಾಗಲಿ!


ಉಕ್ಕಿ ಹರಿಯಲಿ ಛಲ,
ತುಂಬಿ ತುಳುಕಲಿ ಬಲ... ನಿನ್ನ ಮಕ್ಕಳಲ್ಲಿ!
ನರನಾಡಿಗೆ ಸೇರಲಿ ರೋಷ,
ದಿಕ್ಕು- ದಿಕ್ಕಿನಿಂದ ಕೇಳಲಿ ಜಯಘೋಷ... ನಿನ್ನ ದೇಶದಲ್ಲಿ!

ಗಂಗೆಯಂತಾ ನೂರು ನದಿಯಲ್ಲಿ,
ಕುಲ-ಮತವು ಕೊಚ್ಚಿಹೋಗಲಿ ...
ಸಾಸಿರ ಸೂರ್ಯರ ಬೆಳಕಿನಲ್ಲಿ,
ಬ್ರಷ್ಟತನಕೆ ಬೊಬ್ಬೆಯೇರಲಿ...

ಎಂಟೆದೆಯ ಬಂಟರು ಹುಟ್ಟಲಿ,
ಸಿರಿಯ ಹಿರಿಮೆಯಲ್ಲಿ ನೀನು ಬೆಳಗಲಿ...
ನಿನ್ನ ಕಣ್ಣೊರೆಸುವ ಕೈ ನನ್ನದಾಗಲಿ,
ಭಾರತಿ, ನಿನಗೆ ಜಯವಾಗಲಿ!

Sunday, January 1, 2012

ಶುಭಾಷಯ!


ಮಾಮರವು ಚಿಗುರೊಡೆದು,
ಕಂಪನು ಬೀಸಲಿ ...

ನೀಲಾಂಬರದಿಂದ ಶಶಿಯು,
ತಂಪನು ಸುರಿಸಲಿ...
ನನ್ನವರಿಗಾಗಿ ಹೊಸ-ವರುಷದಲಿ !

ಶುಭವ ಕೋರಿ ನಭದಿಂದ,
ಪ್ರಭಾಪಾತವು ಹರಿಯಲಿ ...

ಹೊಸ ಬೆಳಕು ಮೂಡಣದಿಂದ,
ಹರುಷವನು ಹೊತ್ತು-ತರಲಿ ...
ನನ್ನವರಿಗಾಗಿ ಹೊಸ-ವರುಷದಲಿ !

ನೂರು ನಗೆಯಲಿ ಮುಖವು ಅರಳಲಿ !
ನೂರೆಂಟು ಬಗೆಯಲಿ ಸುಖವು ಸೇರಲಿ !
ನಿಮಗಿದೋ ಆಶಯ, ನನ್ನ ಶುಭಾಷಯ...