Monday, March 30, 2026

ಮರೆತಿಹನೇ ಮಾಧವ !





             ಕೌಂತೇಯರ ಕಡೆ ಮಾಧವ 

ನಡೆಸುವೆನಷ್ಟೇ  ರಥವ; ಮಾಡೆನೆಂದ ಯುದ್ಧವ 


ಉಳಿಸಿ-ಬೆಳೆಸುವೆನೆಂದ ಧರ್ಮವ 


             ಕೌರವರ ಕಡೆ ಶಾಂತನವ 

             ರೋಷದಿಂ ಮಾಡಿದ ಶಪಥವ 

             ಕೃಷ್ಣನ ಕೈಲಿ ಹಿಡಿಸುವೆನೆಂದ ಆಯುಧವ 


             ರಸಮಯವಾಯ್ತು ರಣರಂಗ ರೌರವ


             ಶುರುವಾಯ್ತು ಭೀಷ್ಮ ಬಲಾನುಜರ ದ್ವಂದ್ವ 


             ಗಾಂಗೇಯ ಹರಿಸಿದ ಗಾಂಡೀವಿಯ ರಕ್ತವ 


             ಉಳಿಸಲು ಅರ್ಜುನನ ಪ್ರಾಣವ 


             ಕೊಲ್ಲುವೆನೆಂದು ಹಿಡಿದ ಕೃಷ್ಣ ರಥ ಚಕ್ರವ


             ಮರೆತಿಹನೇ ಮಾಧವ !


Monday, January 22, 2024

ಅಭಿರಾಮ !


 

ಖರದೂಷಣ, ಕುಂಭಕರ್ಣ 

ಯಾರಾದರೇನು ಕೊನೆಗೆ ದಶಕಂಠ ರಾವಣ 

ಮಣಿಸಿತು ಎಲ್ಲರನೂ ರಾಮನ ಬಾಣ  

 

ಚಿನ್ನದ ಮನೆ; ಚಿಕ್ಕಮ್ಮನ ಮತ್ಸರದ ಯೋಚನೆ  

ಒಂದೇನು? ಹೆಜ್ಜೆಗೊಂದು ಆಕರ್ಷಣೆ, ಅಡಚಣೆ ! 

ಸೋಲಿಲ್ಲ ! ಗುಣ ಪರೀಕ್ಷೆಯಲಿ ಗೆದ್ದವನು ರಾಮನೇ  

 

ನಡೆ ನೀತಿ ಕಥನ ; ರೂಪವು ಪುಂಸಾ ಮೋಹನ 

ಕಾಮ ಕ್ರೋದಗಳ ಹೆಡೆ ಮುರಿದ ಆದರ್ಶ ಜೀವನ 

ಲೋಕಕ್ಕೆ ಮತ್ತೂಮ್ಮೆ ತೋರಿದ ಹರಿಶ್ಚಂದ್ರನ  


ರಾಮಾಯಣ ಎಂದರೆ ಸತ್ಯಂ ವದ ಧರ್ಮಂ ಚರಾ 

ರಾಮ ರಾಜ್ಯವೆಂದರೆ ಧರ್ಮ ದೇವತೆಗೆ ತುಂಬು ಸಡಗರ 

ಅದಕ್ಕೆ ಕಟ್ಟೇವು ಪ್ರತೀ ಊರಿನಲ್ಲಿ ನಾವು ರಾಮ ಮಂದಿರ 

 

Friday, October 15, 2021

ಜಯಹೋ ದುರ್ಗಾ ಭವಾನಿ !

 


ಮಣಿದರು ರಕ್ಕಸ ರಾಜರು 
ಹರಿಯಿತು ನಿಲ್ಲದೇ ನೆತ್ತರು 

ಅಲ್ಲ, ನವಮಿ ದಶಮಿ ಮಹಿಮೆ 
ತಾಯಿ ದುರ್ಗೆಯ ಗರಿಮೆ! 

ಭಾರವ ಇಳಿಸಲು ದೇವಿ 
ನೆಮ್ಮದಿಯಲಿ ನಲಿದಳು ಭೂದೇವಿ 

ಆಗಿಲ್ಲ ತಾಯಿ ವಿನಾಶ 
ಉಳಿದಿಹುದು ಶತೃ-ಶೇಷ !

ರಾಕ್ಷಸರೇ ರಾಗ-ದ್ವೇಷಗಳು 
ಅಸುರರೇ ಕುಲ ಮತಗಳು 

ಇಂದು ದಶಮಿ ಮತ್ತೇ ಅದೇ ದಿನ 
ಹಿಡಿ ನೀ ದುರ್ಗೆ ಮತ್ತೆ ಶೂಲವನ 

Tuesday, May 21, 2019

ನೀವು ಗುನುಗಿದ ಮಾತುಗಳೇನು ?



ನಿಮ್ಮಂತೆ ಮಿನುಗುತ್ತಾ 
ಬೆಳಕನ್ನು ಚೆಲ್ಲುತ್ತಾ 
ನಿಂತಲ್ಲೇ ನಿಂತಿದ್ದು 
ಏನೆಂದು ಮಾತನಾಡಿಕೊಂಡಿರಾ ?
ಅದು ನಮ್ಮ ಮನೆಯ ದೀಪ .... !


ನಿಮ್ಮನ್ನು ಮುತ್ತಿದ ಗಾಢವಾದ ಕತ್ತಲಂತೆ 
ಕೊನೆಯಿಲ್ಲದ ಗಗನದ ಲೋಕದಂತೆ 
ಬಣ್ಣದ ಚಿತ್ತಾರದಂತೆ ಕಂಡಿದ್ದು 
ಏನೆಂದು ಮಾತನಾಡಿಕೊಂಡಿರಾ ?
ಅದು ನನ್ನಲ್ಲಿ ಸುಳಿದಾಡಿದ ಕನಸು ...!


ನಾನು ಇಲ್ಲದಿರುವಾಗ 
ನಿದಿರೆಯಲ್ಲಿ ಜಾರಿಕೊಂಡಾಗ 
ಮಿನುಗು ತಾರೆಗಳೇ 
ನೀವು ಗುನುಗಿದ ಆ ಮಾತುಗಳೇನು ?

Sunday, December 2, 2018

ಅತಿಶಯದ ಪರಿಚಯ !


ನಿನ್ನ ನೆನಪಾದಲ್ಲಿ 
ಸಂಭ್ರಮದ ಕಚಗುಳಿಯಲ್ಲಿ 
ಮನವು ಸುಖಿಸಿ ರಮಿಸಿದ 
ಆ ಕ್ಷಣದ ಹೆಸರು ಅತಿಶಯ ಗೆಳತಿ ... 

ನೀ ಎದುರಾದಲ್ಲಿ 
ಒಮ್ಮೆಲೆ  ಒಡಲು ಹಗುರಾದಲ್ಲಿ 
ಉಸಿರೊಂದೇ ಮಾತಾಗಿ ಮೂಕವಾದ 
ಆ ನೆನಪಿನ ಹೆಸರು ಪರಿಚಯ ಗೆಳತಿ ... 

Wednesday, October 18, 2017

ಬೆಳಕಿನ ಹಬ್ಬ!



ಭುವಿಯಿಂದ ಬಾನಿಗೆ 
ಬೆಳಕನು ಹರಿಸಿತು ದೀವಿಗೆ 
ನಸು-ನಗುವ ತಾರೆಗೆ 
ಸೇರುವ ಆಸೆಯಾಯಿತು ದೀಪದ ಸಾಲಿಗೆ !

ಎಂತಹುದು ಹಬ್ಬ ... ಈ ಬೆಳಕಿನ ಹಬ್ಬ ... 

ರಕ್ಕಸನ ಹೊರೆ 
ತಾಳಲಾಗದೆ ದಣಿದಳು ಧರೆ !
ಕ್ಷಮೆಯುಂಟೇ ಹೆತ್ತ ಮಗನಾದರೆ ?
ಮದಿಸಿ ಮಗನ, ನುಡಿದಳು ಧರೆ - ಒಳಿತಿಗಾಗಿ ಪಕ್ಷವನು ಮರೆ !

ಎಂತಹುದು ಹಬ್ಬ ... ಈ ಬೆಳಕಿನ ಹಬ್ಬ ... 

Tuesday, November 15, 2016

ಮೊದಲ ಕ್ಷಣಗಳು...

              
              ನಂಬಬಹುದೇ ನಿನ್ನ ನಗುವನು ?
              ತಿಳಿಯಬಹುದೇ 
              ನನ್ನವಳೆಂದು ನಿನ್ನನು ?

              ಉಳಿಸಿಕೊಳ್ಳಬಹುದೇ ನಿನ್ನ ನೆನಪನ್ನು ?
              ಮರಳಿ ಮತ್ತೊಮ್ಮೆ 
              ಕೇಳಬಹುದೇ ನಿನ್ನ ದನಿಯನ್ನು ?

              ಇರಲಿ 
              ಒಪ್ಪಿಗೆಯೆಲ್ಲಿದೆ ?
              ಒಪ್ಪಂದವೆಲ್ಲಿದೆ ? ಹೃದಯದ ಭಾಷೆಗೆ !

              ಪುಸ್ತಕದ ಮೊದಲ ಸಾಲು 
              ಪರಿಚಯದ ಮೊದಲ ಕ್ಷಣಗಳು 
              ಎಂದಿಗೂ ಸವಿ ಸವಿ ಹನಿಗಳು 

Wednesday, October 26, 2016

ಭಜರಂಗಿ ಕೋಪ !




         ಆಯಿತು
       ಎಂದೋ ಸುಟ್ಟು ಬೂದಿಯಾಯಿತು
       ಲಂಕಾರೂಪ
       ಇನ್ನೂ ನೀಗಲಿಲ್ಲವೇ ನಿನ್ನ ಕೋಪ ?

       ಬಿದ್ದ
       ಎಂದೋ ಉರುಳಿ ಬಿದ್ದ
       ಹತ್ತು ತಲೆಯ ಹೊತ್ತ ರಾವಣ ಭೂಪ
       ಇನ್ನೂ ನೀಗಲಿಲ್ಲವೇ ನಿನ್ನ ಕೋಪ ?

       ನೆಚ್ಚಿಹರು
       ಬಹಳ ಮೆಚ್ಚಿಹರು ನಿನ್ನ ಕನ್ನಡಿಗರು
       ಎಲ್ಲೆಲ್ಲೂ ನಿನ್ನನ್ನೇ ಅಚ್ಚಿಹರು, ನೆನೆದಿಹರು

       ತಣ್ಣಗಾಗಲಿ ಇನ್ನಾದರೂ ನಿನ್ನ ಕೋಪ ಭಜರಂಗಿ !

Wednesday, May 18, 2016

ಧರ್ಮವಿದೇ ಧರಣಿಯಲ್ಲಿ !



ಧರ್ಮವಿದೇ
ಅನುತಿರಲು ಧರಣಿ 
ತಲ್ಲಣಗೊಂಡೆನು ನಾ ಹರಿಣಿ !

ಹುಸಿಯಲ್ಲ !
ಹಸಿದ ಹುಲಿಗೆ 
ಹಸಿ ಮಾಂಸದ ಬಯಕೆ 
ಕಾಡಿನರಸ ಕೇಸರಿಗೆ 
ಬಿಸಿ ನೆತ್ತರ ಬಯಕೆ 

ಏನು ನೀತಿಯಿದು ಧರಣಿ ?

ಕ್ರೂರ ಮೃಗಗಳ ಹಸಿವನು 
ನನ್ನ ಅಸುಗಳಲ್ಲಿ ತೀರಿಸಲೇಕೆ ?
ನಮ್ಮಂತೆ 
ಹಸಿರಲ್ಲಿ ಹಸಿವು ತೀರದು ಏಕೆ ?

ಏನು ನೀತಿಯಿದು ಧರಣಿ ?
ಕೊನೆ ಉಸಿರ ಎಳೆಯುವ ಮುನ್ನ 
ಏನು ನೀತಿಯಿದು 
ಒಮ್ಮೆ ಹೇಳಿಬಿಡು ಧರಣಿ ..... 

Monday, March 7, 2016

ಮಸಣದ ಬಂಧು !



ಮುರಿದ ಬಂಧ 
ಮುಗಿದ ಅನುಬಂಧ 
ಮನಸಿನಲಿ ಮಮತೆಯನು ಕಲಕಿದಾಗ 
ಕಂಬನಿ ಉಕ್ಕಿ ಹರಿದಾಗ 

ಮಸಣದಲ್ಲಿ 
ಕಣ್ಣೊರೆಸುವ ಬಂಧು ನೀನೊಬ್ಬನೆ 
ಮಸಣವೇ ನಿನ್ನ ಮನೆ !

ಯಾರು ? ಇನ್ನಾರು ?
ಬದುಕಿನಲಿ ಮತ್ತಾರು ?
ಬೇಸರದಲ್ಲಿ ಭರವಸೆಯನು ಹುಡುಕುವಾಗ  
ಬದುಕು ಸಾಕನಿಸುವಾಗ 


ಮಸಣದಲ್ಲಿ 
ಕಣ್ಣೊರೆಸುವ ಬಂಧು ನೀನೊಬ್ಬನೆ 
ಮಸಣವೇ ನಿನ್ನ ಮನೆ !

ವಿಷ ಸರ್ಪವಿದೆ ! ವಿಷ ಕಂಠವಿದೆ !
ಹಣೆಯಲಿ ಕಿಡಿ-ಕಾರುವ ಕಣ್ಣಿದೆ !!
ಆದರೇನು; ಸಂತೈಸುವ ಮನಸಿದೆ 

ಮಸಣದಲ್ಲಿ ಮನೆ ಮಾಡಿ 
ಕಣ್ಣೊರೆಸುವ ಬಂಧು 
ನಿನ್ನ ಬಿಟ್ಟು ಮತ್ತಾರು !  

Wednesday, March 2, 2016

ಉಳಿವುದೇ ಮನ !


ನೂರು ಮಾತೇಕೆ ?

ನಮ್ಮೂರ ಬೆಳದಿಂಗಳು 
ಕಿರುತಾರೆ ಕಂಗಳು 
ನೆನಪಾಗಿದೆ ನಿನ್ನ ನೋಡಿ ... 

ನಿಶ್ಶಬ್ದ ರಾತ್ರಿಯಲ್ಲಿ 
ಅತಿಶಯದ ಮಾತುಗಳು 
ಒಂಟಿತನದ ಕಲ್ಪನೆಯಲ್ಲಿ 
ಒಲಿಸುವಂತಾ ಮಾತುಗಳು 
ನೆನಪಾಗುತಿದೆ ಗೆಳತಿ ... 

ಸೆಳೆಯುತಿರೆ ಹೀಗೆ ಕಣ್ಣು 
ಉಳಿವುದೇ ಮನ ಇನ್ನು ...!! 

Monday, January 18, 2016

ಬಣ್ಣದ ಕನಸು!



ನಿದ್ದೆಯಲ್ಲಿ 
ಮೈ-ಮರೆತ ಕಣ್ಣಿಗೆ 
ಬಣ್ಣವನು ಹಚ್ಚಿಹೋದ ಈ ಕನಸು 
ಯಾವುದು ?

ಹಿಡಿಯಷ್ಟು ಆಸೆ 
ಕಡಲಷ್ಟು ಪ್ರೀತಿ !
ಕಲೆಸಿ ಬೆರೆಸಿ ಬಿಡಿಸಿದ 
ಬಣ್ಣದ ಚಿತ್ತಾರ ಈ ಕನಸು !

ನೀಲಿ ಗಗನದಲ್ಲಿ 
ನೆನಪಾಗಿ ನಿಂತು 
ಬಿಡದೆ ನಿರಂತರ ಹಿಂಬಾಲಿಸಿದ 
ಛಾಯೆ ಈ ಕನಸು !

ಯಾವುದು ಈ ಬಣ್ಣದ ಕನಸು ?

Thursday, December 10, 2015

ಆ ಊರಿನಲ್ಲಿ ಹೇಗೆ ?



ಸಾಗರದ ಆಚೆಯಿಂದ 
ತೇಲಿ ಬಂದ ಹಕ್ಕಿ 
ಆ ಊರಿನಲ್ಲಿ ಹೇಗಿದೆ ?

ಮಿಟುಕುವುದೇ ?
ತುಂಬು ಕತ್ತಲಲ್ಲಿ ಚುಕ್ಕಿಯ ಕಣ್ಣು ... 
ಎಟುಕುವುದೇ ?
ಬೆಟ್ಟದ ಮೇಲಿಂದ ಆಗಸದ ಬೆನ್ನು ... 
ಆ ಊರಿನಲ್ಲಿ ಹೇಗೆ ?

ಕರಗುವುದೇ ?
ತಿಳಿ ಮುಂಜಾವಿನಲ್ಲಿ ಕನಸಿನ ಬಣ್ಣ ... 
ಕರೆಯುವುದೇ ?
ಹೂವಿನ ಕುಡಿ-ನೋಟ ದುಂಬಿಯನ್ನ ... 
ಆ ಊರಿನಲ್ಲಿ ಹೇಗೆ ?

ನಗಿಸುವನೇ ?
ತುಂಬುಗೆನ್ನೆಯ ಚಂದ್ರ ಮಕ್ಕಳನ್ನ ... 
ಉಣಿಸುವುದೇ ?
ಗೂಡಿನಲ್ಲಿ ಹಕ್ಕಿ ಗುಟುಕನ್ನ ... 
ಆ ಊರಿನಲ್ಲಿ ಹೇಗೆ ಹಕ್ಕಿ ?

Sunday, October 18, 2015

ನಮಾಮಿ ಭಾಸ್ಕರ !


             ಕತ್ತಲ ಕೂಪದಲ್ಲಿ
           ನಿಘೂಡ ನೋವುಗಳು 
           ಮೂಡಣದಲ್ಲಿ 
           ಮನಸುಗಳಲ್ಲಿ 
           ಹೆಪ್ಪುಗಟ್ಟಿ ಹುತ್ತವಾಗಿ 
           ನಿನ್ನ ಉದಯವ ಕವಿಯುತಿದೆ 

           ಚಂಡ ರಶ್ಮಿಯ ಹರಿಸುತ 
           ಭಾಸ್ಕರ 
           ತಮಸ್ಸುಗಳ ತಳಹದಿಯ 
           ಥಳಿಸು ಬಾ 
           ಪಶ್ಚಿಮದಿಂದ ಪೂರ್ವಕ್ಕೆ 
           ನಡೆದು ಬಾ

Sunday, August 30, 2015

ಢವ ಢವ ಡಮರುಕದಲ್ಲಿ...!



          ಉದಯರವಿ ಹರಿಸಿದ ಚೇತನ 
        ದಿಕ್ಕುಗಳ ಕಣ್ಣು ಮುಚ್ಚಿದ ಕತ್ತಲು 
        ಬತ್ತ ಆಸೆಗಳು; ಭರವಸೆಯ ಬಿಂದುಗಳು ... 
        ಏನೇನೋ ಇದೆ ಹೃದಯದ ಕೋಣೆಯಲ್ಲಿ 
        ಹಿಡಿಯಷ್ಟು ಜೀವದಲ್ಲಿ .... 

        ಹರಿವ ನದಿಗಳ ನಾದ 
        ಮುರಿದ ವೀಣೆಯ ವಿಷಾದ 
        ಹಳಸಿದ ಚಿಂತೆಗಳು; ಅರಳಿದ ಕನಸುಗಳು 
        ಏನೇನೋ ಇದೆ ಹೃದಯದ ಕೋಣೆಯಲ್ಲಿ
        ನೆತ್ತರ ಚಿಲುಮೆಯಲ್ಲಿ .... 

        ಕದಲಿ ಬದಲಾಗುವ ಋತುಗಳ ಹೊಸತನ 
        ದೀಪವನ್ನು ಮುತ್ತಿದ ಹುಳುಗಳ ಹುಚ್ಚುತನ 
        ಮುರಿದ ಕ್ಷಣಗಳು; ಮೆರೆದ ದಿನಗಳು 
        ಏನೇನೋ ಇದೆ ಹೃದಯದ ಕೋಣೆಯಲ್ಲಿ
        ಢವ ಢವ ಡಮರುಕದಲ್ಲಿ .... 

Saturday, July 25, 2015

ಪತಂಗ ಯಾನ ...


ಎಲೆಯೆಲೆಗಳ ಮಡಿಲಲ್ಲಿ 
ಮಲೆ ಮಲ್ಲಿಗೆಯ ಕಿವಿಯಲ್ಲಿ 
ಏನನ್ನೋ ನುಡಿಯುತ್ತಿದೆ 
ಪಿಸುಮತಾಡುತಿದೆ ಮೆಲ್ಲಗೆ ... 

ಇಬ್ಬನಿ ಹನಿಗಳ, ಮುತ್ತಿನ ಹನಿಗಳ 
ಬೇಕೆಂದು ಕೇಳುತಿದೆಯೋ ... 
ಉಸಿರು ಉಸಿರಲಿ ಮೈಮರೆಯುತ 
ಗಂಧವನು ಸವಿಯುತಿದೆಯೋ ... 

ಬೆಟ್ಟದ ಬಯಲನು 
ಬಣ್ಣಿಸಿ ಹೇಳುತಿದೆಯೋ 
ಹುಟ್ಟದ ಹೂಗಳ 
ಹೆಸರನು ಕೇಳುತಿದೆಯೋ .... 

ಮೈಯ್ಯ ಬಣ್ಣಗಳ 
ಬಿಡಿಸಿ ತೋರುತಿದೆಯೋ 
ಕೆನ್ನೆಯ ಕೊನೆಯಲ್ಲಿ 
ಮುತ್ತನು ನೀಡುತಿದೆಯೋ ... 

ಮರಳಿ ಬರುವೆನೆನ್ನುತ 
ಹೂವಿಂದ ಹೂವಿಗೆ ಸಾಗುತಿದೆ 
ಪತಂಗ ಯಾನ ... 

Sunday, June 21, 2015

ಬಣ್ಣದ ಕಾರಂಜಿ !


ಬಣ್ಣವಿದೆ, ಭಾವವಿದೆ 
ಜೀವಭಾವ ಹರಿಸುವ ಲಾಸ್ಯವಿದೆ 

ನಾದವಿದೆ, ವಿನೋದವಿದೆ 
ಮಿಡಿದು ಮೈಮರೆಸುವ ಮೋಹವಿದೆ 

ನಗುವಿದೆ, ನಾಟ್ಯವಿದೆ 
ನೂರೆಂಟು ಕನಸುಗಳ ಸ್ಪರ್ಶವಿದೆ 

ಸೆಳೆತವಿದೆ, ಸಂತಸವಿದೆ 
ಮನಸಿನಾಳಕೆ ಸೇರುವ ಸ್ಪೂರ್ತಿಯಿದೆ 

ಬಣ್ಣದಲಿ ಬೆರೆತ ಜೋಗವಿದೆ 
ವೈಣಿಕನಿಲ್ಲದೆ ನುಡಿವ ವೀಣೆಯಿದೆ 
ಚಿಮ್ಮುತ ನಲಿದಾಡಿದ ಕಾರಂಜಿಯಿದೆ 
ಬಣ್ಣದ ಕಾರಂಜಿಯಿದೆ ..... 

Monday, May 11, 2015

ಅಮ್ಮನ ವೇದನೆ !


          ಹೊತ್ತು ತಿರುಗಿದೆನೊ ನಿನ್ನ  
          ನನ್ನ ಹೊಟ್ಟೆಯಲಿ !
          ಮತ್ತೊಮ್ಮೆ ಹುಟ್ಟಿ-ಬಂದೆನೊ ಚಿನ್ನ 
          ನಿನಗೆ ಜೀವವ ಕೊಡುತಲಿ ... 

          ಇದಾವುದಕ್ಕೂ ನೀನು ಬೆಲೆ ಕಟ್ಟಬೇಕಿಲ್ಲ ... 
          ಲಾಲಿ ಹಾಡಿಗೂ, ಉಣಿಸಿದ ಹಾಲಿಗೂ ನೀನು ಬೆಲೆ ಕಟ್ಟಬೇಕಿಲ್ಲ ... 

          ಗಾಯದ ನೋವೋ; ಹಸಿವಿನ ಅರಿವೋ ಅದು 
          ಬಿಡಿಸಿ ಹೇಳಲಾಗದೆ ಅಳುತಲೇ ಇದ್ದೆ ನೀನು !
          ಕಂಡೆಲ್ಲಾ ದೇವರಲ್ಲಿ ಹರಸಿದೆ ಅಂದು 
          ಎಲ್ಲವನ್ನೂ ಮಡಿಲಲ್ಲೇ ಮರೆಸಿದೆ ನಾನು ... 

          ಇದಾವುದಕ್ಕೂ ನೀನು ಬೆಲೆ ಕಟ್ಟಬೇಕಿಲ್ಲ ... 
          ಅಕ್ಕರೆಯ ಮುತ್ತಿಗೂ; ಪ್ರೀತಿಯ ತುತ್ತಿಗೂ ನೀನು ಬೆಲೆ ಕಟ್ಟಬೇಕಿಲ್ಲ ...

          ಕೃಶಳಾಗಿ ಸೊರಗಿಹೆನು 
          ಶಕುತಿಯಾ ಕಳೆದು ಸೋತಿಹೆನು 
          ಹೊತ್ತಿಗೊಂದು ತುತ್ತನು ಕೇಳುತಿಹೆನು!
          ಇದಕ್ಕೆ ಬೆಲೆಯನು ಕೇಳಬೇಡವೋ ಕಂದ ... 

          ಇನ್ನೊಂದು ಜನುಮದಲಿ ಮತ್ತೊಮ್ಮೆ ಹೆತ್ತು ಋಣವ ತೀರಿಸುವೆನು 
          ನನ್ನೆದೆಯು ಒಡೆದು ಚೂರಾಗುವ ಮಾತದು !! 
          ಬೆಲೆಯನು ಕೇಳಬೇಡವೋ ಕಂದ ...


Friday, March 27, 2015

ಸುಂದರಕಾಂಡ

ಅಲ್ಲೊಂದು ಲಂಕಾಪುರಿ ಸಾಗರದಲ್ಲಿ 
ಅಸುರ ವೀರ ರಾವಣ ರಾಜನಲ್ಲಿ
ಕದ್ದ ಸೀತೆ ಅಶೋಕ ವನದಲ್ಲಿ... 

ಸೀತೆಯನು ಹುಡುಕುತ ಹೊರಟರು
ಹಲವು ದಿಕ್ಕಿನಲಿ ರಾಮ ಧೂತರು
ವೀರ ಹನುಮನ ಹಾಡಿ ಹೊಗಳಿದರು ...

ಸಾಗರ ದಾಟಿ ಲಂಕೆಯ ಸೇರಿದ
ಅಶೋಕ ವನದಲ್ಲಿ ಸೀತೆಯ ನೋಡಿದ
ಸೀತೆಯ ಕಂಬನಿ ನೋಡಿ ಕಡು ನೊಂದ ...

ರಾಮನ ಉಂಗುರ ಸೀತೆಯ ಕೈಗೆ
ಸೀತೆಯ ಒಡವೆ ರಾಮನ ಕೈಗೆ
ಸೇರಿಸಿ; ಹಬ್ಬವ ತಂದ ಅವರಿಬ್ಬರ ಮನಸಿಗೆ ...

ಸೀತೆಯಿಂದ ಮೆಚ್ಚುಗೆಯ ಪಡೆದುಕೊಂಡ
ಅತಿಯಾಗಿ ನಲಿದ ರಾಮನು ಅಪ್ಪಿಕೊಂಡ
ಅದಕೇ ಇದು ಸುಂದರಕಾಂಡ ... 

Saturday, February 14, 2015

ನೀನ್ಯಾರೆ ..?


ನಗುತ 
ನನ್ನೆದೆಯ ಚಿವುಟಿ ಹೋದ 
ನಿನ್ನ ಮಿನುಗು ನೋಟ 
ಕರಗದೆ ನಿನ್ನೋರೆಗಣ್ಣಲಿ ಒರಗಿ ನಿಂತಿದೆ 


ನಾಚುತ 
ಕೆಂದುಟಿಯ ಮೇಲೆ ಅರಳಿ ನಿಂತ 
ನಿನ್ನ ನಗುವು 
ಮೆಲ್ಲಗೆ ನನ್ನೆದೆಯ ಗೂಡಲಿ ಘಲ್ಲೆನಿಸಿದೆ 


ನೀನ್ಯಾರೆ?
ತಿಳಿ ನೀರಿನಲ್ಲಿ ನಸು-ನಗುವ 
ಕೆಂದಾವರೆಯೋ ..?
ಬೆಳ್ಳಿ ಚಂದ್ರಂಗೆ ಕಾದು ನೋಡುವ 
ಒಂಟಿ ತಾರೆಯೋ ...?
ನೀನ್ಯಾರೆ ..?

Sunday, January 4, 2015

ಮೂಡಣದಲ್ಲಿ ಮನವಿ ...



ಸತ್ಯಾಂಶ ಸುಳಿವ ಜಗದಲ್ಲಿ 
ಮಂಕು ಕವಿಸುವ 
     ತಮಸ್ಸು ಮೂಡುತಿದೆ ಇರುಳಲ್ಲಿ ... 
ಮೂಡಣವ ಅಗಲಿ, 
        ಪಡುವಣಕೆ ನೀ ಸೇರದಿರು ರವಿಯೆ .... 

ಹೂ-ಗರ್ಭದಿಂದ ಹರಿವ ನಗುವು 
ನೀ ಇಲ್ಲದ ಬದುಕು ಬೇಡವಾಗಿ, 
    ಬಾಡುತಿದೆ ಹೂಗಳ ನವಿರು ತುಟಿಗಳ ಮೇಲೆ ... 
ನಿತ್ಯ-ಚೇತನವ ಚದುರಿಸಿ, 
ನೀ ಮುಳುಗದಿರು ರವಿಯೆ... 

ಕೆರಳಿದ ಕಡಲಿನ ಅಲೆಗಳ ಮೇಲೆ 
ದಾರಿಯನು ಹುಡುಕುತ ಹಡಗು, 
ನೀ ಇಲ್ಲದೆ ಕತ್ತಲಲ್ಲಿ ಕಂಗಾಲಾಗಿದೆ...  
ಬೆಳಕಿಂದ ಭುವಿಯನು ತಣಿಸುತ 
ನೀ ಬೆಳಗುತಿರು ವಿಯೆ .... 


Friday, November 7, 2014

ಅರೆ-ರಾತ್ರಿ ಕಳೆಯುವ ಮುನ್ನ....!



        ಮೆತ್ತನೆಯ ಗಾಳಿಗೆ ಕಿವಿಗೊಟ್ಟು 
        ಅತ್ತಿತ್ತ ತೂಗುತಿದೆ ಹಸಿರ ಪೈರು .... 
        ಬೆಚ್ಚನೆಯ ಬಿಸಿಲಿಗೆ ಮುತ್ತಿಟ್ಟು 
        ಎಲೆಯೆಲೆಯೂ ಬೀರುತಿದೆ ನಗೆ ನೂರು .... 

        ಕೊನೆ ಸಂಜೆ ಕ್ಷಣದಲ್ಲಿ 
        ಅಕ್ಕರೆಯಿಂದ ರವಿಗೊಮ್ಮೆ ಕೈ-ಬೀಸಬೇಕು ... 

        ಗಗನದ ಬೆನ್ನಿಗೆ ಬೆನ್ನು ಕೊಟ್ಟು 
        ಒತ್ತಗೆ ಮಲಗಲು ಮೋಡಗಳು ತಯಾರು .... 
        ಹೊತ್ತಿನಲ್ಲಿ ಹತ್ತು ಕಣ್ಣಿಟ್ಟು 
        ಮಿರು-ಮಿನುಗಲು ಕಾದಿದೆ ಕಿರುತಾರೆ ನೂರಾರು .... 

        ಅರೆ-ರಾತ್ರಿ ಕಳೆಯುವ ಮುನ್ನ 
        ಬೆಳ್ಳಿ ಬೆಳಕಿನಲಿ ಮನಸಾರೆ ತಣಿಯಬೇಕು .... 

Saturday, October 18, 2014

ಬಾಡದಿರು ನೀನು .... !


ಇಳಿ ಸಂಜೆಯ ಕೊನೆಯಲ್ಲಿ 
ಬಾಡದಿರು ನೀನು ಬಣ್ಣದ ಹೂವೆ ... 

ನಿನ್ನ ಮುಟ್ಟಿ ಜೇನ ಕಟ್ಟಿ 
ಬೆಟ್ಟದ ಬಾಗಿಲಿಗೆ 
ಸಿಹಿ ತೋರಣ ಕಟ್ಟುವ ವೇಳೆ  
ಬಾಡದಿರು ನೀನು ಬಣ್ಣದ ಹೂವೆ ... 

ಆಗಸದ ಆಚೆಯಿಂದ 
ಸಿಹಿನೀರ ಹನಿಯೊಂದು 
ನಿನ್ನ ಚೆಂದುಟಿಯ ತಣಿಸಲು ಬರುವ ವೇಳೆ 
ಬಾಡದಿರು ನೀನು ಬಣ್ಣದ ಹೂವೆ ... 

ಅರೆಗಣ್ಣು ತೆರೆದು ಕುಡಿಗಳು  
ಸಂಜೆ ಹೂವಾಗಿ ಬಿರಿದು 
ತಂಗಾಳಿಯಲಿ ಹಸಿರು ಭಾವ ಉಸಿರಾಡುವ ವೇಳೆ 
ಬಾಡದಿರು ನೀನು ಬಣ್ಣದ ಹೂವೆ ... !

Monday, September 8, 2014

ದುರ್ಭರ ಧರ್ಮ !


ಹೊತ್ತು ಉರಿದು ಸುಡಬೇಕು ಕಾಡು 
ಕಾಳ್ಗಿಚ್ಚಿನ ತಣಿವು ತೀರಲು !

ಮೃದುವಾದರೂ, ಮಧುರವಾದರೂ 
ಹಸಿರಾದರೂ, ಉಸಿರಾದರೂ 
ಜ್ವಾಲೆಗಳ ಜಿಹ್ವೆ ಚಿಂತಿಸದು !
ಬೆಂಕಿಯಲಿ ಕರಗುವ ಕೂಗು ಕೇಳಿಸದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 

ಉಕ್ಕಿ ಹರಿದು ನದಿಗಳು ಕೊಚ್ಚಿಹೋಗಬೇಕು ನಾಡು 
ವರುಣನಿಗೆ ಕರುಣೆಯ ನೆನಪಾಗಲು !

ಮನುಕುಲವು ಮಸಣವಾದರೂ
ಜೀವರಾಶಿ ಒಂಟಿಯಾದರೂ 
ಮುಗಿಲಿಗೆ ಸುದ್ಧಿ ಸೇರದು !
ಮಳೆರಾಯನ ನರ್ತನೆ ನಿಲ್ಲದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 



Friday, August 29, 2014

ಚವಿತಿ ಚಂದ್ರಪ್ಪ !


ಬೆಳ್ಗಿದ್ದೂ ಬಿಡುವಾಗಿದ್ರೂ,


ಕಾಣೋವ್ರು ಯಾರೂ ಇಲ್ದೆ 
ಕಂಡೋವ್ರು ಹಾರಾಮಾಗಿಲ್ದೆ  


ದಿನ ಕಳ್ದೋಗಕ್ಕೆ ಕಾಯ್ತಾ 
ಕಡುಬು ತಿನ್ನೋವ್ರನ್ನ ನೋಡ್ತಾ 


ನಕ್ಬಾರ್ದಾಗಿತ್ತು ಗಣಪನ್ನ ನೋಡಿ ಅದ್ಕೊಂಡು 
ಎಲ್ಲರಿಗೂ ಹೇಳ್ಕೊಂಡು 


ಸುಮ್ನಾದ ನಮ್ ಚಂದ್ರಪ್ಪ 
ಗಣಪನ್ನ ನೋಡಿ ಯಾರೂ ನಕ್ಬೇಡ್ರಪ್ಪಾ ...



Sunday, July 13, 2014

ಅಂಗೈಲಿ ರಂಗೋಲಿ...!!



ಬೆರಳ ಮೇಲೆ ಬಣ್ಣದ ಬಳ್ಳಿ 
ಬಳುಕುತ ಏರುತಿದೆ ನಾಚುತಲಿ 
ಅಂಗೈಲಿ ಮಾಡುತ ಕಚಗುಳಿ..!

ತಂಪಾಗಿ ತಾವರೆಯಂತೆ 
ತಿಳಿಗೆಂಪಾಗಿ ತರುಣಿಯ ಕೆನ್ನೆಯಂತೆ 
ಬೆರಳುಂಗರವನು  ಅಪ್ಪುತಿದೆ..!

ಮೆತ್ತಗೆ ಹೂವಿನ ಒಡಲಂತೆ 
ಮತ್ತಾಗಿ ಹೂವಿನ ಮಡಿಲಂತೆ 
ಕೈಬಳೆಯನು ಮುತ್ತುತಿದೆ ..!

ಬಾಡುತ ಕೈ-ಬಿಸಿಯಲ್ಲಿ 
ಕುಸಿಯುತ ಅಪ್ಪಿ ನಿಂತಲ್ಲಿ 
ಬಣ್ಣದ ಹೆಜ್ಜೆಯನು ಉಳಿಸಿದೆ ... ಅಂಗೈಲಿ ರಂಗೋಲಿ !!
 

Saturday, June 7, 2014

ಒಳ್ಳೆಯದೇ ಆಯಿತು...



                       ಒಳ್ಳೆಯದೇ ಆಯಿತು
                  ಮರದಡಿ ಮರುಗಿದ ಕಾಲ ವರುಷವೇ ಆಯಿತು ..!

                  ರಕ್ಕಸಿಯರ ನಡುವೆ
                  ಒಂಟಿ ಹೆಣ್ಣಿನ ಬಾಳ್ವೆ !
                  ಅಂಜಿ, ಅತ್ತು  ಸೊರಗಿದ ಕಾಲ ವರುಷವೇ ಆಯಿತು ...

                  ಧರಣಿಯಲ್ಲವೇನು ಹೆತ್ತ ತಾಯಿ ?
                  ಕಂಬನಿ ಒರೆಸಲು ಮರೆಯಿತು ಅವಳ ಕೈಯ್ಯಿ
                  ಒಳ್ಳೆಯದೇ ಆಯಿತು! ಆ ದುರ್ಭರ ಕಾಲ ವರುಷವೇ ಆಯಿತು ...

                  ಗಿಡ-ಮರವಲ್ಲವೇನು  ಒಡ-ಹುಟ್ಟಿದವರು ?
                  ಚೂರು ನೆರಳು ಬಿಟ್ಟು ಮತ್ತೇನು ಕೊಟ್ಟರು ...
                  ಒಳ್ಳೆಯದೇ ಆಯಿತು! ಆ ಕೆಟ್ಟ ಕಾಲ ವರುಷವೇ ಆಯಿತು ...

                  ಹೆತ್ತ ತಾಯಿಯ ಮಡಿಲಲಿ
                  ಒಡ-ಹುಟ್ಟಿದವರ ನಡುವಿನಲಿ
                  ನೊಂದು ಕೊರಗಿದ ಕಾಲ ಮತ್ತಾರಿಗೂ ಬಾರದಿರಲಿ ...

                  ಸಹಿಸಿದಳು ಹೇಗೋ ಸೀತೆ ! ಶೋಕ ವನಿತೆ ! 

Sunday, April 20, 2014

ಮುಸ್ಸಂಜೆ ಮನಸು ...




ಮತ್ತದೇ ಮುನಿಸು ಸುಂದರ ಸಂಜೆಗೆ 
ಕರಗಿ ಸೇರುವ ಬಯಕೆ 
ನಿಶಾ ತೀರಕೆ ..!

ಮತ್ತೊಮ್ಮೆ ಮನಸು ಕಡಲಿನ ಹಾಗೆ 
ಸಾಗುತಿದೆ ದೂರಕೆ 
ನೆನಪುಗಳ ತೀರಕೆ ..!

ಮನಸಿನಾಳದಿಂದ ಮೆಲ್ಲುಸಿರು 
ಕಣ್ಣಂಚಿನಿಂದ ಕನಸಿನ ಚಿಗುರು 
ಮೂಡುತಿದೆ, ಮನಸನು ಕಲಕಿದೆ ....!

ಜೋಡಿ ಮೋಡದಿಂದ ಜಡಿ-ಮಳೆಯ ಜೋರು,
ಕಡಲಿನ ಕೊನೆಯಿಂದ ಅಲೆಗಳ ತೇರು 
                               ಮೊದಲಾಗಿದೆ, ಮೈಮರೆತು ಜೀವ ತಣಿಯುತಿದೆ ....! 

Sunday, November 17, 2013

ಸ್ವೇಚ್ಛೆಗೊಂದು ಪಂಜರ !!

ಕಚ್ಚಿ ನೋಡಿ ಹಸಿ ಹಣ್ಣುಗಳ 
ಮೆಚ್ಚಿ ಮತ್ತೊಂದು ತಿಂದ 
ಆ ದಿನಗಳು ಇನ್ನಿಲ್ಲ ...!

ಬಿಚ್ಚಿ ರೆಕ್ಕೆಗಳ ಬಾನಗಲ 
ಹುಚ್ಚು ಅನಿಸುವಂತೆ ಹಾರಾಡಿದ 
ಆ ದಿನಗಳು ಇನ್ನಿಲ್ಲ ...!

ಜೋಡಿಯಾಗಿ ಜೊತೆ-ಜೊತೆಯಲಿ 
ಜಗವನ್ನೇ ಸುತ್ತಿಬಂದ 
ಆ ದಿನಗಳು ಇನ್ನಿಲ್ಲ ...!

ಜೀಕುತ ತೀರದ ತಪ್ಪಲಲ್ಲಿ 
ಜಡಿ-ಮಳೆಯಲಿ ನೆಂದ 
ಆ ದಿನಗಳು ಇನ್ನಿಲ್ಲ ...!

ಬಾಗಿಲೇ ಇಲ್ಲದ ನನ್ನ ಮನೆಗೆ 
ಕಬ್ಬಿಣದ ಕಂಬಿಗಳ ಕಾವಲು .... 
ಬಯಲಲ್ಲೇ ಕಳೆದ ನನ್ನ ಬದುಕಿಗೆ 
ಬದುಕಿ ಉಳಿಯುವ ಸವಾಲು ...

ನನ್ನ ಸ್ವೇಚ್ಛೆಗಿದು ಪಂಜರ .... 

 

Sunday, September 29, 2013

ಅರುಣೋದಯ...


ಅರುಣನ ಉದಯವು 
ಕೆಂದಾವರೆ ಅರಳುವ ಸಮಯವು 
ಚಿಲಿಪಿಲಿ ಕೇಳಿದರೆ ಮಧುರವು 

ಮಂಜಿನ ಸೋನೆ 
ಮುಂಜಾನೆಯಲಿ ಸುರಿವಾಗ ತಣ್ಣನೆ 
ಕರಗಿತು ಮನಸಿನಲಿ ಬೇನೆ!  

ಹೊಸಬೆಳಕಿನ ಕಿರಣ 
ಹೊಂಗನಸಿನ ಮನನ 
                                   ಜೊತೆ ಸೇರಿದ ಪ್ರತೀದಿನ ನವ ನವೀನ ... 

 

Sunday, August 11, 2013

ಮಧುಸ್ನಾನ ಮಹಾಶಿವಂಗೆ!


                 
                  ಬುಸುಗುಡುತ 
                  ಹೆಗಲಮೇಲೆ ಹೆಡೆಯನೆತ್ತಿದ ವಿಷನಾಗ!
                  ವಿಷವ ಕಾರುತ 
                  ಉಸಿರಾಡಲು, ಬೆನ್ನು ಬಿಸಿಯಾಯಿತೇನೊ ಆಗ 

                  ತಣ್ಣಗಾಗಲಿ ಮಧುಸ್ನಾನದಲಿ ಮಹಾಶಿವಂಗೆ ... 

                  ಅಂಗೈಲಿ ಹಿಡಿಯುತ 
                  ವಿಷವನೆಲ್ಲಾ ಕುಡಿದ ಕಡಲನು ಕಡಿದಾಗ 
                  ಗಂಟಲನು ಸೇರುತ 
                  ಕೊರಳು ನೀಲವಾಗುತಿರಲು ಕಹಿಯಾಯಿತೇನೊ ಆಗ 

                  ಸಿಹಿಯಾಗಲಿ ಮಧುಸ್ನಾನದಲಿ ಮಹಾಶಿವಂಗೆ ...

                  ತಪಸನು ಮಾಡುತ 
                  ಕಣ್ಣಲ್ಲೇ ಕಿಡಿಕಾರಿ ಮನುಮಥನ ಸುಟ್ಟಾಗ 
                  ಬೆಂಕಿಯು ಚಿಮ್ಮುತ 
                  ಉರಿಯುತಿರಲು, ಹಣೆಯೆಲ್ಲವೂ ತುಸು ಬಿಸಿಯಾಯಿತೇನೊ ಆಗ 

                  ತಂಪಾಗಲಿ ಮಧುಸ್ನಾನದಲಿ ಮಹಾಶಿವಂಗೆ ...

                  ಮೂರು ಲೋಕವನು ಕಾಯುವ ತಂದೆಗೆ ... 
                           
 

Sunday, July 7, 2013

ಗ್ರಹಬಲ!



          ಮೂಡಲ ಮನೆಯ ಒಡೆಯ 
        ರಥವೇರಿ ಬಂದಾಗ 
        ರಜನಿಯು ಕಾಣದೆ ಕಣ್ಮರೆಯಾದಾಗ 
        ಹರಿದ ಬೆಳಕು, ಯಾರಿಗೂ ಕೆಡಕಲ್ಲವೊ ಗೆಳೆಯ 
        ಪ್ರತಿ ದಿನವೂ ಶುಭ ದಿನವೇ... ನೀ ತಿಳಿಯ .... !! 

    
        ಗ್ರಹಗಳ ಗತಿಯನು, ಸಮಯದ ಸ್ಥಿತಿಯನು ಮರೆಯ 
        ಬೆವರುವಂತೆ ದಣಿದಾಗ 
        ಮೋಸವನು ಮರೆತು ನಡೆದಾಗ!! 
        ಹುಡುಕಿ ಬರುವುದೊ ನಿನ್ನ ಫಲವು ತಿಳಿಯ 
        "ಸಕಲ ಗ್ರಹಬಲ ನೀನೇ ಸರಸಿಜಾಕ್ಷ... " ಎಂದು ಮುನ್ನೆಡೆಯ ... 
                                                                                                

Sunday, May 26, 2013

ಆಸೆಯಲ್ಲಿ ಯಾನ..!


ಎದೆಯೊಳಗಿನ ಜೀವ ಭಾವ 
ನಿಜವಾಗಲೆಂಬ ಅತೀವ ಆಸೆ ...!
ಕಣ್ಣಾಲಿಯಲಿ ಕನಸಿನ ಹಾವ-ಭಾವ 
ನನಸಾಗಲೆಂಬ ಮಹದಾಸೆ ...!

ಸೇರಬಂತು ಈ ಸಂಜೆಯಲ್ಲಿ 
ತನುವು ತೇಲಿತು ತಾರಾ ತೀರದಲ್ಲಿ .... 


ಕಲ್ಲು-ಸಕ್ಕರೆಗೆ ಕೊಂಚ ಅಕ್ಕರೆ ಬೆರೆಸಿದಂತೆ,
ಮೆಲ್ಲು-ದನಿಯೊಂದು ಮನಸನ್ನು ಮುಟ್ಟುತಿದೆ 
ತಂಗಾಳಿಗೆ ತೋರಣವು ಕದಲುವಂತೆ,
ಮಿಡಿತವೊಂದು ಮನಸನ್ನು ಮೀಟುತಿದೆ... 

ಹಾಗೇ ಸುಳಿಯುತಿದೆ ಸುತ್ತಲ ಮೌನ,
ನಿಲ್ಲದೆ ಸಾಗುತಿದೆ ಆಸೆಯಲ್ಲಿ ಯಾನ...  

Wednesday, April 24, 2013

ಮರಳಿಬಾರದೇಕೊ.....!!


                          ಮುಸ್ಸಂಜೆ ಮಳೆಯಲ್ಲಿ
                     ಉಕ್ಕಿ ಹರಿದ ಹೊಳೆಯಲ್ಲಿ 
                     ತೇಲಿಬಿಟ್ಟ ಹಡಗು.........  ನೆಂದು ಉರುಳಿದ ನೆನಪು ...

                     ತುಂಬು ಕೆರೆಯ ಪಕ್ಕದಲ್ಲಿ
                     ಮುದ್ದು ಮಾತನು ಕೇಳುತಲಿ 
                     ಕೈಬೆರಳು ಹಿಡಿದು .......... ನಡೆದು ಹೋದ ನೆನಪು ....

                     ಬೆಟ್ಟದಡಿಯ ಬಯಲಲ್ಲಿ
                     ಬಣ್ಣ ಬಣ್ಣದ ಬಗೆಯಲ್ಲಿ
                     ಮುಗಿಲ ಮನೆಯತ್ತ ......... ಪಟವನು ಹಾರಿಸಿದ ನೆನಪು ....

                     ಅದಾವುದೋ ಕಥೆಯಲ್ಲಿ
                     ಅದಾರೊ ಸೋತ ಖುಷಿಯಲ್ಲಿ
                     ಮನಸಾರೆ ಜೊತೆ ಜೊತೆಯಾಗಿ ....... ಚಪ್ಪಾಳೆ ತಟ್ಟಿದ ನೆನಪು ....

                     ಅದೇ ನೆನಪು ...
                     ಮುಚ್ಚು ಮರೆಯಿಲ್ಲದೆ ನಕ್ಕು ನೆಗೆದ ನೆನಪು ...
                     ಹಗುರ ಮನಸಿನ ತುಂಬಾ ಅದೇ ನೆನಪು !!

                     ಮರಳಿಬಾರದೇಕೊ ಆ ಕ್ಷಣಗಳು ...!




Thursday, March 7, 2013

ನಿಲ್ಲದ ಹಲ್ಲೆ !!



                            ಜೀವಜಾಲದ ಆಳಕೆ ಸೇರಿ 
                            ಮೊದಲ ಮಾತಿನಲಿ ಬೆರೆತ ಮಧುರ ಕಾವ್ಯ - "ಅಮ್ಮ" !

                            ಒಡಗೂಡಿ ನಡೆದ ಪ್ರತೀ ದಿನದಲಿ 
                            ಅಕ್ಕರೆಯಲಿ ಅಮ್ಮನಿಗೆ ಸಾಟಿ ಇವಳು - "ಸೋದರಿ" !

                            ರಂಗು ರಂಗಿನ ಹುಚ್ಚು ಕನಸಿನಲಿ 
                            ಅರಿವಾಗದೆ ಬಿರಿದ ನೂತನ ಕವನ - "ಗೆಳತಿ" !

                            ಒಂದಾಗಿ ನಡೆದ ಏಳು ಹೆಜ್ಜೆಯಲಿ 
                            ಜೊತೆಯಾಗಿ ಮಿಡಿದ ಜೀವನರಾಗ - "ಒಡತಿ" !

                            ಬದುಕೆಲ್ಲವೂ ಹೆಣ್ಣೇ!!

                           ಅವಳಿಲ್ಲದ ಜೀವನ ಸುಳ್ಳೇ !! 
                           ಅರಿವಾಗಿ ನಿಲ್ಲಬೇಕು ಹಲ್ಲೆ !

Wednesday, February 13, 2013

ಪ್ರೇಮಿಗಳ ಮಾತು ..!!



                                                ಮಳೆಯಲಿ,
                                      ಮೊದಲ ಹನಿ  !
                                      ಮುಂಜಾನೆಯಲಿ,
                                      ಕರಗದ ಇಬ್ಬನಿ !
                                      ನಿನಗಾಗಿ ತರುವೆ ....

                                      ಚಳಿಯಲಿ,
                                      ಬೆಚ್ಚನೆಯ ಕಿವಿಮಾತು !
                                      ಇರುಳಲಿ,
                                      ಕನಸಿಗಾಗಿ ಸವಿಮಾತು !
                                      ನಿನಗಾಗಿ ಹೇಳುವೆ ....

                                      ಹಿತ ಭಾಷೆಯಲಿ,
                                      ಓಲೆಯನು !
                                      ನಿನ್ನ ಹೋಲಿಸುತಲಿ,
                                      ಕವಿತೆಯನು !
                                      ನಿನಗಾಗಿ ಬರೆಯುವೆ ....

                                      ಬದುಕಿನಲಿ,
                                      ಅನುದಿನ ಸುಖವನು !
                                      ಅನುದಿನದಲಿ,
                                      ಪ್ರತಿ-ಕ್ಷಣ ನಲಿವನು !
                                      ನಿನಗಾಗಿ ಕೋರುವೆ ....

                                      ನನ್ನ ಜೊತೆಯಾಗು ಬಾ ಗೆಳತಿ .....!