Friday, November 7, 2014

ಅರೆ-ರಾತ್ರಿ ಕಳೆಯುವ ಮುನ್ನ....!



        ಮೆತ್ತನೆಯ ಗಾಳಿಗೆ ಕಿವಿಗೊಟ್ಟು 
        ಅತ್ತಿತ್ತ ತೂಗುತಿದೆ ಹಸಿರ ಪೈರು .... 
        ಬೆಚ್ಚನೆಯ ಬಿಸಿಲಿಗೆ ಮುತ್ತಿಟ್ಟು 
        ಎಲೆಯೆಲೆಯೂ ಬೀರುತಿದೆ ನಗೆ ನೂರು .... 

        ಕೊನೆ ಸಂಜೆ ಕ್ಷಣದಲ್ಲಿ 
        ಅಕ್ಕರೆಯಿಂದ ರವಿಗೊಮ್ಮೆ ಕೈ-ಬೀಸಬೇಕು ... 

        ಗಗನದ ಬೆನ್ನಿಗೆ ಬೆನ್ನು ಕೊಟ್ಟು 
        ಒತ್ತಗೆ ಮಲಗಲು ಮೋಡಗಳು ತಯಾರು .... 
        ಹೊತ್ತಿನಲ್ಲಿ ಹತ್ತು ಕಣ್ಣಿಟ್ಟು 
        ಮಿರು-ಮಿನುಗಲು ಕಾದಿದೆ ಕಿರುತಾರೆ ನೂರಾರು .... 

        ಅರೆ-ರಾತ್ರಿ ಕಳೆಯುವ ಮುನ್ನ 
        ಬೆಳ್ಳಿ ಬೆಳಕಿನಲಿ ಮನಸಾರೆ ತಣಿಯಬೇಕು .... 

Saturday, October 18, 2014

ಬಾಡದಿರು ನೀನು .... !


ಇಳಿ ಸಂಜೆಯ ಕೊನೆಯಲ್ಲಿ 
ಬಾಡದಿರು ನೀನು ಬಣ್ಣದ ಹೂವೆ ... 

ನಿನ್ನ ಮುಟ್ಟಿ ಜೇನ ಕಟ್ಟಿ 
ಬೆಟ್ಟದ ಬಾಗಿಲಿಗೆ 
ಸಿಹಿ ತೋರಣ ಕಟ್ಟುವ ವೇಳೆ  
ಬಾಡದಿರು ನೀನು ಬಣ್ಣದ ಹೂವೆ ... 

ಆಗಸದ ಆಚೆಯಿಂದ 
ಸಿಹಿನೀರ ಹನಿಯೊಂದು 
ನಿನ್ನ ಚೆಂದುಟಿಯ ತಣಿಸಲು ಬರುವ ವೇಳೆ 
ಬಾಡದಿರು ನೀನು ಬಣ್ಣದ ಹೂವೆ ... 

ಅರೆಗಣ್ಣು ತೆರೆದು ಕುಡಿಗಳು  
ಸಂಜೆ ಹೂವಾಗಿ ಬಿರಿದು 
ತಂಗಾಳಿಯಲಿ ಹಸಿರು ಭಾವ ಉಸಿರಾಡುವ ವೇಳೆ 
ಬಾಡದಿರು ನೀನು ಬಣ್ಣದ ಹೂವೆ ... !

Monday, September 8, 2014

ದುರ್ಭರ ಧರ್ಮ !


ಹೊತ್ತು ಉರಿದು ಸುಡಬೇಕು ಕಾಡು 
ಕಾಳ್ಗಿಚ್ಚಿನ ತಣಿವು ತೀರಲು !

ಮೃದುವಾದರೂ, ಮಧುರವಾದರೂ 
ಹಸಿರಾದರೂ, ಉಸಿರಾದರೂ 
ಜ್ವಾಲೆಗಳ ಜಿಹ್ವೆ ಚಿಂತಿಸದು !
ಬೆಂಕಿಯಲಿ ಕರಗುವ ಕೂಗು ಕೇಳಿಸದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 

ಉಕ್ಕಿ ಹರಿದು ನದಿಗಳು ಕೊಚ್ಚಿಹೋಗಬೇಕು ನಾಡು 
ವರುಣನಿಗೆ ಕರುಣೆಯ ನೆನಪಾಗಲು !

ಮನುಕುಲವು ಮಸಣವಾದರೂ
ಜೀವರಾಶಿ ಒಂಟಿಯಾದರೂ 
ಮುಗಿಲಿಗೆ ಸುದ್ಧಿ ಸೇರದು !
ಮಳೆರಾಯನ ನರ್ತನೆ ನಿಲ್ಲದು !!

ಪ್ರಕೃತಿಯ ದಯೆಯಿಲ್ಲದ ದುರ್ಭರ ಧರ್ಮ ... 



Friday, August 29, 2014

ಚವಿತಿ ಚಂದ್ರಪ್ಪ !


ಬೆಳ್ಗಿದ್ದೂ ಬಿಡುವಾಗಿದ್ರೂ,


ಕಾಣೋವ್ರು ಯಾರೂ ಇಲ್ದೆ 
ಕಂಡೋವ್ರು ಹಾರಾಮಾಗಿಲ್ದೆ  


ದಿನ ಕಳ್ದೋಗಕ್ಕೆ ಕಾಯ್ತಾ 
ಕಡುಬು ತಿನ್ನೋವ್ರನ್ನ ನೋಡ್ತಾ 


ನಕ್ಬಾರ್ದಾಗಿತ್ತು ಗಣಪನ್ನ ನೋಡಿ ಅದ್ಕೊಂಡು 
ಎಲ್ಲರಿಗೂ ಹೇಳ್ಕೊಂಡು 


ಸುಮ್ನಾದ ನಮ್ ಚಂದ್ರಪ್ಪ 
ಗಣಪನ್ನ ನೋಡಿ ಯಾರೂ ನಕ್ಬೇಡ್ರಪ್ಪಾ ...



Sunday, July 13, 2014

ಅಂಗೈಲಿ ರಂಗೋಲಿ...!!



ಬೆರಳ ಮೇಲೆ ಬಣ್ಣದ ಬಳ್ಳಿ 
ಬಳುಕುತ ಏರುತಿದೆ ನಾಚುತಲಿ 
ಅಂಗೈಲಿ ಮಾಡುತ ಕಚಗುಳಿ..!

ತಂಪಾಗಿ ತಾವರೆಯಂತೆ 
ತಿಳಿಗೆಂಪಾಗಿ ತರುಣಿಯ ಕೆನ್ನೆಯಂತೆ 
ಬೆರಳುಂಗರವನು  ಅಪ್ಪುತಿದೆ..!

ಮೆತ್ತಗೆ ಹೂವಿನ ಒಡಲಂತೆ 
ಮತ್ತಾಗಿ ಹೂವಿನ ಮಡಿಲಂತೆ 
ಕೈಬಳೆಯನು ಮುತ್ತುತಿದೆ ..!

ಬಾಡುತ ಕೈ-ಬಿಸಿಯಲ್ಲಿ 
ಕುಸಿಯುತ ಅಪ್ಪಿ ನಿಂತಲ್ಲಿ 
ಬಣ್ಣದ ಹೆಜ್ಜೆಯನು ಉಳಿಸಿದೆ ... ಅಂಗೈಲಿ ರಂಗೋಲಿ !!
 

Saturday, June 7, 2014

ಒಳ್ಳೆಯದೇ ಆಯಿತು...



                       ಒಳ್ಳೆಯದೇ ಆಯಿತು
                  ಮರದಡಿ ಮರುಗಿದ ಕಾಲ ವರುಷವೇ ಆಯಿತು ..!

                  ರಕ್ಕಸಿಯರ ನಡುವೆ
                  ಒಂಟಿ ಹೆಣ್ಣಿನ ಬಾಳ್ವೆ !
                  ಅಂಜಿ, ಅತ್ತು  ಸೊರಗಿದ ಕಾಲ ವರುಷವೇ ಆಯಿತು ...

                  ಧರಣಿಯಲ್ಲವೇನು ಹೆತ್ತ ತಾಯಿ ?
                  ಕಂಬನಿ ಒರೆಸಲು ಮರೆಯಿತು ಅವಳ ಕೈಯ್ಯಿ
                  ಒಳ್ಳೆಯದೇ ಆಯಿತು! ಆ ದುರ್ಭರ ಕಾಲ ವರುಷವೇ ಆಯಿತು ...

                  ಗಿಡ-ಮರವಲ್ಲವೇನು  ಒಡ-ಹುಟ್ಟಿದವರು ?
                  ಚೂರು ನೆರಳು ಬಿಟ್ಟು ಮತ್ತೇನು ಕೊಟ್ಟರು ...
                  ಒಳ್ಳೆಯದೇ ಆಯಿತು! ಆ ಕೆಟ್ಟ ಕಾಲ ವರುಷವೇ ಆಯಿತು ...

                  ಹೆತ್ತ ತಾಯಿಯ ಮಡಿಲಲಿ
                  ಒಡ-ಹುಟ್ಟಿದವರ ನಡುವಿನಲಿ
                  ನೊಂದು ಕೊರಗಿದ ಕಾಲ ಮತ್ತಾರಿಗೂ ಬಾರದಿರಲಿ ...

                  ಸಹಿಸಿದಳು ಹೇಗೋ ಸೀತೆ ! ಶೋಕ ವನಿತೆ ! 

Sunday, April 20, 2014

ಮುಸ್ಸಂಜೆ ಮನಸು ...




ಮತ್ತದೇ ಮುನಿಸು ಸುಂದರ ಸಂಜೆಗೆ 
ಕರಗಿ ಸೇರುವ ಬಯಕೆ 
ನಿಶಾ ತೀರಕೆ ..!

ಮತ್ತೊಮ್ಮೆ ಮನಸು ಕಡಲಿನ ಹಾಗೆ 
ಸಾಗುತಿದೆ ದೂರಕೆ 
ನೆನಪುಗಳ ತೀರಕೆ ..!

ಮನಸಿನಾಳದಿಂದ ಮೆಲ್ಲುಸಿರು 
ಕಣ್ಣಂಚಿನಿಂದ ಕನಸಿನ ಚಿಗುರು 
ಮೂಡುತಿದೆ, ಮನಸನು ಕಲಕಿದೆ ....!

ಜೋಡಿ ಮೋಡದಿಂದ ಜಡಿ-ಮಳೆಯ ಜೋರು,
ಕಡಲಿನ ಕೊನೆಯಿಂದ ಅಲೆಗಳ ತೇರು 
                               ಮೊದಲಾಗಿದೆ, ಮೈಮರೆತು ಜೀವ ತಣಿಯುತಿದೆ ....!